ಹೇಮಾವತಿ
	ಭಾರತದ ಕರ್ನಾಟಕ ರಾಜ್ಯದ ಒಂದು ಮುಖ್ಯನದಿ ಮತ್ತು ಕಾವೇರಿನದಿಯ ಉಪನದಿ. ಇದನ್ನು ಎಣ್ಣೆಹೊಳೆ ಎಂದೂ ಕರೆಯುತ್ತಾರೆ. ಈ ನದಿ ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನಲ್ಲಿ ಮೆಲಬಂಗಾಡಿಯ ಜಾವಳಿಯ ಬಳಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿಯುವುದು. ಸೋಮಾವತಿ ಹೊಳೆ, ದೊಡ್ಡಹಳ್ಳ, ಕಪಿಲಾ ಮೊದಲಾದ ತೊರೆಗಳನ್ನು ಕೂಡಿಕೊಂಡು ಹಾಸನ ಜಿಲ್ಲೆಯನ್ನು ಪ್ರವೇಶಿಸುವ ಮುನ್ನ ಸ್ವಲ್ಪದೂರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗಡಿಯಾಗಿ ಹರಿದು ಬೇಲೂರು ತಾಲ್ಲೂಕನ್ನು ಬೇರ್ಪಡಿಸು ವುದು. ಅನಂತರ ಸಕಲೇಶಪುರ ತಾಲ್ಲೂಕನ್ನು ಸಕಲೇಶಪುರದ ಉತ್ತರಕ್ಕೆ 6 ಕಿಮೀ ದೂರದಲ್ಲಿರುವ ಹೆಣ್ಣಳ್ಳಿಯ ಪೂರ್ವದಲ್ಲಿ ಪ್ರವೇಶಿಸುವುದು. ಸ್ವಲ್ಪದೂರ ದಕ್ಷಿಣಾಭಿಮುಖವಾಗಿ ಹರಿದು ಸಕಲೇಶಪುರವನ್ನು ಬಳಸಿಕೊಂಡು ಆಗ್ನೇಯಾಭಿಮುಖವಾಗಿ ಪ್ರವಹಿಸಿ ಪೂರ್ವಾಭಿಮುಖ ವಾಗಿ ತಿರುಗುವುದು. ಹಾಗೆ ತಿರುಗಿದಾಗ ಸ್ವಲ್ಪದೂರ ಹಾಸನ ಜಿಲ್ಲೆಯ ಗಡಿಯಾಗಿ ಹರಿದು ಕೊಡಗು ಜಿಲ್ಲೆಯನ್ನು ವಿಂಗಡಿಸುವುದು. ಮುಂದೆ ಆಲೂರು, ಹಾಸನ ತಾಲ್ಲೂಕುಗಳ ದಕ್ಷಿಣ ಗಡಿಯಾಗಿ ಹರಿದು ಅರಕಲಗೂಡು ತಾಲ್ಲೂಕನ್ನು ಬೇರ್ಪಡಿಸಿ ಗೊರೂರು ಬಳಿ ಯಗಚಿ ನದಿಯನ್ನು ಕೂಡಿಕೊಂಡು ಹೊಳೆನರಸೀಪುರ ತಾಲ್ಲೂಕಿನ ಮುಖಾಂತರ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುವುದು. ಕೊಡಗು ಜಿಲ್ಲೆಯ ಗಡಿಯಾಗಿ ಹರಿಯುವಾಗ ಈ ನದಿಗೆ ಐಗೂರು ನದಿ ಮತ್ತು ಕಟ್ಟೆಹಳ್ಳ ದಕ್ಷಿಣದಿಂದ ಸೇರಿಕೊಳ್ಳುತ್ತವೆ. ಮುಂದೆ ನದಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದ ನೈಋತ್ಯದಲ್ಲಿ ಕಾವೇರಿಯನ್ನು ಸೇರಿಕೊಳ್ಳುವುದು. ಈ ನದಿಯ ಒಟ್ಟು ಹರಿವಿನ ಉದ್ದ ಸು. 258 ಕಿಮೀ ಇದ್ದು, ಹಾಸನ ಜಿಲ್ಲೆಯೊಂದರಲ್ಲೇ ಸು. 182 ಕಿಮೀ ದೂರ ಹರಿಯುವುದು. ಈ ನದಿಯ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾಗಿದೆ. ಹೊಳೆನರಸೀಪುರದಿಂದ 6 ಕಿಮೀ ದೂರದಲ್ಲಿ ಈ ನದಿಗೆ ಕಟ್ಟಿರುವ ಶ್ರೀರಾಮದೇವರ ಕಟ್ಟೆಯಿದೆ. ಈ ಕಟ್ಟೆ ನೂರು ವರ್ಷಕ್ಕೂ ಹಿಂದಿನದು. ಈಗ ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ಕಟ್ಟಲಾಗಿದೆ. ಇದರಿಂದ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ 2.8 ಲಕ್ಷ ಹೆಕ್ಟೇರ್‍ಗಳಿಗೂ ಹೆಚ್ಚು ಜಮೀನಿಗೆ ನೀರೊದಗುತ್ತಿದೆ. 

	ಈ ನದಿಯ ಹುಟ್ಟನ್ನು ಕುರಿತು ಎರಡು ದಂತಕಥೆಗಳಿವೆ. ಒಂದು ಕಥೆಯ ಪ್ರಕಾರ ದಕ್ಷನ ಮಗಳು ಹೇಮಾವತಿ. ಒಮ್ಮೆ ದಕ್ಷ ಯಜ್ಞಮಾಡಿದಾಗ ಅವನು ಶಿವನನ್ನು ಆಹ್ವಾನಿಸದೆ ಅವಮಾನಪಡಿಸಿದ. ಶಿವನ ಪತ್ನಿ ಹೇಮಾವತಿ ಆ ಅವಹೇಳನವನ್ನು ಸಹಿಸದೆ ಅಗ್ನಿಕುಂಡದಲ್ಲಿ ಹಾರಿದಳು. ಅಗ್ನಿ ಹೇಮಾವತಿಯನ್ನು ಹಿಂದಕ್ಕೆ ಎತ್ತಿತಂದಾಗ ಆಕೆ ಸ್ವರ್ಣದಂತೆ ಹೊಳೆಯುತ್ತಿದ್ದಳಂತೆ. ಚಿನ್ನದ ಬಣ್ಣವುಳ್ಳ ಆಕೆ ಹೇಮಾವತಿಯಾದಳು. ಈಶ್ವರನ ಆಜ್ಞೆಯಂತೆ ಲೋಕಕಲ್ಯಾಣಕ್ಕಾಗಿ ಆಕೆ ನದಿಯಾಗಿ ಹರಿದಳು. ಮತ್ತೊಂದು ಕಥೆಯ ಪ್ರಕಾರ ಹಿಂದೆ ಪೊನ್ನಾತನೆಂಬಾತ ಪೊನ್ನಾತಪುರವನ್ನು ಆಳುತ್ತಿದ್ದ (ಈಗ ಆಲೂರು ತಾಲ್ಲೂಕಿನ ಒಂದು ಗ್ರಾಮ). ಆತನಿಗೆ ಹೇಮ ಮತ್ತು ಹೊನ್ನಿ ಎಂಬ ಇಬ್ಬರು ಪತ್ನಿಯರಿದ್ದರು. ಬಹುಕಾಲವಾದರೂ ಅವರಿಗೆ ಮಕ್ಕಳಾಗದಿರಲು ವೈರಾಗ್ಯ ತಾಳಿ ಸರ್ವವನ್ನೂ ತ್ಯಾಗಮಾಡಿದ. ಈತನ ಪತ್ನಿಯರಲ್ಲಿ ಹೇಮ ನದಿಯಾಗಿ ಹರಿದರೆ, ಹೊನ್ನಿ ರಾಮನಾಥಪುರದಲ್ಲಿ ವಾಹಿನಿ ಪುಷ್ಕರಣಿಯಾದಳಂತೆ. 
												(ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ